ನಮ್ಮ ಬಗ್ಗೆ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ, ಮತ್ತು ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಲು ಕರ್ನಾಟಕ ಸರ್ಕಾರವು ಭಾರತ ಸಂವಿಧಾನದ ಅನುಚ್ಛೇದ ಕಲಂ 15(4) ಮತ್ತು 16(4)ರ ಪ್ರಕಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸರ್ಕಾರದ ಆದೇಶ ಸಂಖ್ಯೆ ಸಕಇ 225 ಬಿಸಿಎ 2000, ದಿನಾಂಕ:30.3.2002ಗಳನ್ವಯ ಹಿಂದುಳಿದ ವರ್ಗಗಳಿಗೆ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಮತ್ತು ಸರ್ಕಾರಿ ನೇಮಕಾತಿಗಳಲ್ಲಿ ಈ ಕೆಳಕಂಡಂತೆ ಶೇಕಡ 28 ರಷ್ಟು ಮೀಸಲಾತಿ ಸೌಲಭ್ಯವನ್ನು ಕಲ್ಪಿಸಲಾಗಿರುತ್ತದೆ.
ವರ್ಗ | ಶೇಕಡ |
---|---|
ಪ್ರವರ್ಗ – 1 | 4% |
ಪ್ರವರ್ಗ – 2ಎ | 15% |
ಪ್ರವರ್ಗ – 3ಎ | 4% |
ಪ್ರವರ್ಗ – 3ಬಿ | 5% |
ಒಟ್ಟು | 28% |
ಕರ್ನಾಟಕ ಸರ್ಕಾರವು ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ವರ್ಗಗಳು ಮತ್ತು ಇತರೆ ಹಿಂದುಳಿದ ವರ್ಗಗಳ ನೇಮಕಾತಿಗಳಲ್ಲಿ ಮೀಸಲಾತಿ ಇತ್ಯಾದಿ ಅಧಿನಿಯಮ 1990ನ್ನು 1.6.1992ರಿಂದ ಜಾರಿಗೆ ತಂದಿದೆ.
ಹಿಂದುಳಿದ ವರ್ಗಗಳಿಗೆ ಸಂವಿಧಾನದ ಅನುಚ್ಛೇದ 15(4) ಮತ್ತು 16(4)ರ ಪ್ರಕಾರ ಶಿಕ್ಷಣ ಮತ್ತು ನೇಮಕಾತಿಗಳಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಲಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು “ಮಾರ್ಗದರ್ಶನ ಹಾಗೂ ಉದ್ಯೋಗ ಜಾರಿ ಕೋಶವನ್ನು” ಈ ಇಲಾಖೆಯಲ್ಲಿ ಸ್ಥಾಪನೆ ಮಾಡಲಾಗಿದೆ. ಇಲಾಖೆಯ ತನಿಖಾ ತಂಡಗಳು ಕರ್ನಾಟಕ ರಾಜ್ಯ ಸರ್ಕಾರದ ಇಲಾಖೆಗಳ, ನಿಗಮಗಳ, ಸಹಕಾರ ಸಂಸ್ಥೆಗಳ, ಕಂಪನಿಗಳ, ಘೋಷಿತ ಸಂಸ್ಥೆಗಳ, ರಾಜ್ಯ ಸರ್ಕಾರದ ಉದ್ಯಮಗಳ ಹಾಗೂ ಇವುಗಳ ಘಟಕ ಕಛೇರಿಗಳ ಪರಿವೀಕ್ಷಣೆ ನಡೆಸಿ, ಮೀಸಲಾತಿ ಉಲ್ಲಂಘನೆಯಾದಂತಹ ಪ್ರಕರಣಗಳನ್ನು ಗುರುತಿಸಿ, ನಿಯಮಗಳ ಪ್ರಕಾರ ಕ್ರಮ ಜರುಗಿಸಲಾಗುತ್ತಿದೆ.
ದೃಷ್ಟಿ ಮೂಲೋದ್ದೇಶಗಳು ಕಾರ್ಯಾಚರಣೆ
ಹಿಂದುಳಿದ ವರ್ಗಗಳ ಜನಾಂಗವನ್ನು ಮುಖ್ಯವಾಹಿನಿಗೆ ತರುವುದು.
ಹಿಂದುಳಿದ ವರ್ಗಗಳ ಜನರ ಆರ್ಥಿಕಾಭಿವೃದ್ಧಿಗಾಗಿ, ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಮತ್ತು ಸಹಾಯಧನದ ನೆರವು ಒದಗಿಸುವುದು. ಹಿಂದುಳಿದ ವರ್ಗಗಳಿಗೆ ಸೇರಿದ ಸಾಂಪ್ರದಾಯಿಕ ವೃತ್ತಿದಾರರ ಕೌಶಲ್ಯತೆ ಹೆಚ್ಚಿಸಿಕೊಳ್ಳಲು ಅಗತ್ಯ ತರಬೇತಿ ಮತ್ತು ಸಾಲ ಮತ್ತು ಸಹಾಯಧನದ ನೆರವು ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಸಣ್ಣ ಮತ್ತು ಅತೀ ಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವುದು.
ಹಿಂದುಳಿದ ವರ್ಗಗಳ ಜನರು ಸ್ವಯಂ ಉದ್ಯೋಗ ಕೈಗೊಳ್ಳಲು ಸಹಾಯಧನ ಹಾಗೂ ರಿಯಾಯತಿ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವುದು ಮತ್ತು ವೃತ್ತಿ ಕೌಶಲ್ಯತೆ ಹೆಚ್ಚಿಸುವ ತರಬೇತಿ ನೀಡುವುದು.
ಹಿಂದುಳಿದ ವರ್ಗಗಳಿಗೆ ಸೇರಿದ ಜನರ ಆರ್ಥಿಕ ಅಭಿವೃದ್ದಿ ಹೆಚ್ಚಿಸುವುದು.
ಹಿಂದುಳಿದ ವರ್ಗಗಳ ಜನರ ಆರ್ಥಿಕಾಭಿವೃದ್ಧಿಗಾಗಿ ಸರ್ಕಾರವು ಒದಗಿಸಿದ ಅನುದಾನದಲ್ಲಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದು.
ಕಾರ್ಯನಿರ್ವಹಣೆ:
ಹಿಂದುಳಿದ ವರ್ಗಗಳ ಜನರಿಗೆ ಸಾಲ ಸೌಲಭ್ಯ ಒದಗಿಸಲು ಅರ್ಜಿ ಅಹ್ವಾನಿಸಿ, ಅರ್ಹ ಅರ್ಜಿದಾರರನ್ನು ನಿಯಮಾನುಸಾರ ವಿವಿಧ ಆಯ್ಕೆ ಸಮಿತಿಗಳಿಂದ
ಆಯ್ಕೆ ಮಾಡಿ, ಅವರು ಕೈಗೊಳ್ಳುವ ಉದ್ದೇಶ/ಆರ್ಥಿಕ ಚಟುವಟಿಕೆಗಳಿಗೆ ಆರ್ಥಿಕ ನೆರವು ಒದಗಿಸುವುದು. ಆರ್ಥಿಕ ನೆರವು ಪಡೆದುಕೊಂಡ ಫಲಾನುಭವಿಗಳು ಘಟಕ ಸ್ಥಾಪನೆ ಮಾಡಿಕೊಂಡು, ಆರ್ಥಿಕ ಚಟುವಟಿಕೆ ಕೈಗೊಳ್ಳುತ್ತಿರುವ ಬಗ್ಗೆ ಮತ್ತು ಆರ್ಥಿಕವಾಗಿ ಪ್ರಗತಿಯಾಗಿರುವ ಬಗ್ಗೆ ದೃಢೀಕರಿಸಿಕೊಳ್ಳುವುದು.